Friday, May 21, 2010

ನಿದ್ರೆ ಕೆಡಿಸಿದ ವಿಷಯ

ನನ್ನ ಬದುಕಿನಲ್ಲಿ ಮರೆಯಲಾಗದ ದಿನವಾದು, ಹೌದು ಅಂದು ಸಂಕಸ್ಟಿ, ಆ ವೇಳೆಗಾಗಲೇ ಗಣೇಶನ ದರ್ಶನ ಮಾಡಿ , ದೇವರಿಗೆ ಹರಕೆ ಹೊತ್ತು ರೂಮಿಗೆ ಬಂದಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಮನೆಯಿಂದ ಫೋನ್ ಬಂತು. ಫೋನಿನಲ್ಲಿ ಹಾರಿ ಬಂದ ಸಂದೇಶವೇನು ಗೊತ್ತಾ ? ನೀನು ಪಾಸ್ ಆಗಿದ್ದೀಯ ಅಂತ.

ಹೌದು ಎಲ್ಲರೂ ಪ್ರತಿ ವರ್ಷ ಒಂದು ತರಗತಿ ಪಾಸಾಗಿ ಮತ್ತೊಂದು ತರಗತಿಗೆ ಹೋಗ್ತಾರೆ. ಅದ್ರಲ್ಲಿ ಏನು ವಿಶೇಷ ? ವಿಶೇಷ ಇದೆ. ಅಂದು ನಾನು ಬರಿ ಪಾಸಾಗಿರಲಿಲ್ಲ,ಓದಿನಲ್ಲಿ ಮೊದಲ ಸಲ ಫೈಲ್ ಆಗಿ ಪಾಸಾಗಿದ್ದೆ. ಆ ಫೋನ್ ಕರೆ ೨ ತಿಂಗಳು ಅನುಭವಿಸಿದ ಮಾನಸಿಕ ಯಾತನೆಗೆ ಅಂತ್ಯ ಹೇಳಿತ್ತು.

ಹತ್ತನೆ ತರಗತಿಯಲ್ಲಿ ಉತ್ತಮ ಅಂಕಗಳಿಸಿ ಪಾಸಾದ ಮೇಲೆ ಸಹಜವಾಗಿಯೇ ನನ್ನ ಮೇಲೆ ಮನೆಯವರೆಲ್ಲರ ನಿರೀಕ್ಷೆ ಹೆಚ್ಚಾಯಿತು. ಮನೆಯಲ್ಲೇ ಅತ್ಯಂತ ಬುದ್ದಿವಂತನೆಂಬ ಹಣೆಪಟ್ಟಿ ನನ್ನದಾಯ್ತು. PUC ಯಲ್ಲಿ ವಿಜ್ಞಾನ ವಿಷಯವನ್ನ ತೆಗೆದುಕೊಂಡಿದ್ದೆ. ಮೊದಲ ಸಲ ಆಂಗ್ಲ ಮಾದ್ಯಾಮವಾದ್ದರಿಂದ ಮೊದಲ ಕೆಲವು ದಿನಗಳು ಕಷ್ಟವಾಯ್ತು. ನಿಧಾನವಾಗಿ ಅದಕ್ಕೆ ಹೊಂದಿಕೊಂಡಿದ್ದೆ. ಮೊದಲ ವರ್ಷ ಎಲ್ಲವೂ ಸರಿಯಾಗೇ ಇತ್ತು. ನಿಧಾನವಾಗಿ ೨ ನೇ ವರ್ಷ ಓದಿನಲ್ಲಿನ ಆಸಕ್ತಿ ಕಡಿಮೆಯಾಗಿತ್ತು. ಇದಕ್ಕೆ ಕಾರಣಗಳು ಹಲವು. ಕಾರಣಗಳೇನೇ ಇರಲಿ, ಇಲ್ಲಿಯವರೆಗೆ ಅನುತ್ತೀರ್ಣನಾಗದೆ ಇದ್ದ ನನ್ನ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಿಗೆ ಇತ್ತು.

ಆ ದಿನ ಬಂದೇ ಬಿಟ್ಟಿತು, ೨ನೇ ವರ್ಷದ ಪಾಲಿತಾಂಶ ಪ್ರಕಟವಾಯ್ತು. ಎಲ್ಲರ ನಿರೀಕ್ಷೆಯನ್ನ ನಾನು ಹುಶಿ ಮಾಡಿದ್ದೆ. ನನ್ನ ಜೀವನದಲ್ಲಿ ಮೊದಲನೆ ಬಾರಿ ಓದಿನಲ್ಲಿ ಫೈಲ್ ಆಗಿದ್ದೆ. ಅಂದು ಇಂದಿನಂತಲ್ಲ. ಒಮ್ಮೆ ಫೈಲ್ ಆದರೆ ಮುಗಿಯಿತು, ಮುಂದಿನ ತರಗತಿಗಳಿಗೆ ಹೋಗಬೇಕಾದರೆ ಒಂದು ವರ್ಷ ಕಾಯಬೇಕು. ಮತ್ತೊಮ್ಮೆ ಪರೀಕ್ಷೆ ಬರೆಯಬೇಕು ಎಂದರೆ ಅಕ್ಟೋಬರ್ ವರೆಗೆ ಕಾಯಲೇ ಬೇಕು. ಒಂದು ವರ್ಷ ವೇಸ್ಟ್ ಆಗೊದನ್ನ ತಪ್ಪಿಸೋದಕ್ಕೆ ಸಾದ್ಯ ಇರಲಿಲ್ಲ.

ತುಂಬಾನೇ ಬೆಜಾರಾಯ್ತು. ನಾನು ಫೈಲ್ ಆಗಿದ್ದ ವಿಷಯವನ್ನ ಮನೆಯವರಿಗೆ ಹೇಗೆ ಹೇಳೋದು?? ನಿಜ ಹೇಳೋದಕ್ಕೆ ನನ್ನಿಂದ ಸಾದ್ಯವಿರಲಿಲ್ಲ. ಅದಕ್ಕೆ ಇರಬೇಕು ಮನೆಯಲ್ಲಿ ನಾನು ಪಾಸ್ ಆಗಿದ್ದೇನೆಂದು ಸುಳ್ಳು ಹೇಳಿ ಮತ್ತೊಂದು ತಪ್ಪು ಮಾಡಿದ್ದೆ. ನಿಜ ಹೇಳಿ ತಪ್ಪೊಪ್ಪಿಕೊಂಡಿದ್ದರೆ ಮನಸ್ಸಿನ ಅರ್ಧ ಭಾರವನ್ನ ಕೆಳಗಿಳಿಸುತ್ತಿದ್ದೆ. ಆದರೆ ನಿಜ ಹೇಳಲು ದರ್ಯ ಸಾಕಾಗಿರಲಿಲ್ಲ. ಮನೆಯಲ್ಲಿ ಸುಳ್ಳು ಹೇಳಾಗಿದೆ, ಆದರೆ ಇಂದಲ್ಲ ನಾಳೆ ನಿಜ ಗೊತ್ತಾಗುತ್ತದೆ ಎಂಬ ಹೆದರಿಕೆಯಿಂದ ಮನಸ್ಸಿನಲ್ಲೇ ತುಂಭ ಹಿಂಸೆ ಅನುಭವಿಸಿದ್ದೆ.

ಒಂದು ವರ್ಷ ಹಾಳಾಗದಂತೆ ಉತ್ತೀರ್ಣನಾಗಲು ಏನಾದರೂ ಮಾರ್ಗ ಇದೆಯೇ ಎಂದು ವಿಚಾರಿಸಿದೆ. ಅದಕ್ಕೆ ರೀಕೌಂಟಿಂಗ್ & ರಿವ್ಯಾಲ್ಯೂಯೇಶನ್ ೨ ಆಯ್ಕೆಗಳಿದ್ದವು. ರೀ ಕೌಂಟಿಂಗ್ಗೆ ೫೦ ಹಾಗೂ ರೀ ವ್ಯಾಲ್ಯುವೇಶನ್ ಗೆ ೫೦೦ ರೂಪಾಯಿಗಳನ್ನ ಕಟ್ಟಬೇಕಿತ್ತು. ರೀ ಕೌಂಟಿಂಗಲ್ಲಿ ಪಾಸ್ ಆಗೋ ಸಂಭವ ಕಡಿಮೆಯಿರುವದರಿಂದ ರೀ ವ್ಯಾಲ್ಯುವೇಶನ್ಗೇ ಹಾಕಬೇಕೆಂದು ನಿರ್ಣಯಿಸಿದೆ. ಮನೆಯಲ್ಲಿ ಪಾಸ್ ಆಗಿದ್ದೇನೆಂದು ಸುಳ್ಳು ಹೇಳಿದ್ದರಿಂದ ೫೦೦ ರೂಪಾಯಿಗಳನ್ನ ಹೇಗೆ ಕೇಳುವದು? ಯಾಕೆಂದು ಕೇಳಿದರೆ ಏನು ಹೇಳುವದು ಅಂತ ಗೊತ್ತಾಗದೇ ಪೇಚಾಡಿದ್ದೆ. ಯಾರಿಗೂ ತಿಳಿಯದಂತೆ ಮನೆಯಿಂದ ೫೦೦ ರೂಪಾಯಿ ಹಣವನ್ನ ಕದ್ದು ರೀ ವ್ಯಾಲ್ಯುವೇಶನ್ಗೆ ಕಟ್ಟಿದ್ದೆ.

ಮುಂದೇನು ಮಾಡುತ್ತಿಯ ಎಂದು ಕೇಳಿದವರಿಗೆಲ್ಲಾ, ಇಂಜಿನಿಯರಿಂಗ್ ನನಗೆ ಇಸ್ಟವಿಲ್ಲ ಎಂದು, ಕಂಪ್ಯೂಟರ್ ಕೋರ್ಸ್ ಮಾಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಧಾರವಾಡಕ್ಕೆ ತೆರಳಿ ಕಂಪ್ಯೂಟರ್ ಕೋರ್ಸ್ ಸೇರಿಕೊಂಡೆ. ಆದರೆ ಅದೇನೇ ಮಾಡಿದರು ಸುಳ್ಳು ಹೇಳಿ ತಪ್ಪು ಮಾಡಿದೆನಲ್ಲಾ, ಸದಾ ನನ್ನ ಒಳಿತನ್ನೇ ಬಯಸಿದ ಮನೆಯವರಿಗೆ ಸುಳ್ಳು ಹೇಳಿದೆನಲ್ಲಾ ಎಂಭ ಪಾಪ ಪ್ರಜ್ಞೆ ಸದಾ ನನ್ನ ಕಾಡುತ್ತಿತ್ತು. ಇದೇ ಯೋಚನೆಯಲ್ಲಿ ಅದೆಸ್ಟೊ ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆದಿದ್ದೇನೆ. ಅದಕ್ಕೆ ಹೇಳುವದು ನಿದ್ದೆ ಕೆಡಿಸುವಂತ ಕೆಲಸವನ್ನ ಯಾವತ್ತೂ ಮಾಡಬಾರದೆಂದು.

ಈಸ್ಟೆಲ್ಲಾ ಆದರೂ ರೀ ವ್ಯಾಲ್ಯುವೇಶನ್ನಲ್ಲಿ ಪಾಸಾಗುತ್ತೇನೆಂಬ ಒಂದು ನಂಭಿಕೆ ನನ್ನಲ್ಲಿ ಬಲವಾಗಿತ್ತು. ಅದೇ ದರ್ಯ ನನ್ನನ್ನ ಸ್ವಲ್ಪ ಸಮಾದಾನವಾಗಿಟ್ಟಿತ್ತು. ಅದೇ ಅಶೆಯಲ್ಲಿ CET ಕೂಡ ಬರೆದಿದ್ದೆ.

ದೇವರು ನನ್ನ ಕೈ ಬಿಡಲಿಲ್ಲ. ನಾನು ರೀ ವ್ಯಾಲ್ಯುವೇಶನ್ನಲ್ಲಿ ಪಾಸಾಗಿದ್ದೆ. ೫ ಅಂಕ ಹೆಚ್ಚಿಗೆ ಬಂದಿತ್ತು. ನಾನು ಧಾರವಾಡದಲ್ಲಿದ್ದುದರಿಂದ ಕಾಲೇಜ್ ನಿಂದ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆಗಲೇ ಮನೆಯವರಿಗೆ ನಿಜವಾದ ವಿಷಯ ತಿಳಿದಿದ್ದು. ನೇರವಾಗಿ ಮೊದಲು ಕಾಲೇಜ್ಗೆ ಹೋಗಿ ನನ್ನ ಮಾರ್ಕ್ಸ್ ರೆಕಾರ್ಡ್ ತೆಗೆದುಕೊಂಡೆ. ಪಾಸಾಗಿದ್ದರಿಂದ ರೀ ವ್ಯಾಲ್ಯುವೇಶನ್ಗೆ ಕಟ್ಟಿದ ೫೦೦ ರೂಪಾಯಿ ತಿರುಗಿ ಬಂದಿತ್ತು. ಜೊತೆಯಲ್ಲೇ CET ಪಾಲಿತಾಂಶ ಕೂಡ ಬಂದಿತ್ತು. ಅದರಲ್ಲಿ ಉತ್ತಮ ಅಂಕ ಗಳಿಸಿದ್ದೆನಾದರೂ ನನಗೆ ಈಸ್ಟೆಲ್ಲಾ ತೊಂದರೆ ಕೊಟ್ಟ ಜೀವಶಾಸ್ತ್ರ ವಿಷಯವನ್ನ ಪ್ರಧಾನವಾಗಿ ತೆಗೆದುಕೊಂಡು BSc. ಓದಿದೆ.

2 comments:

  1. hmm... Banesh revaluation hakodakke help madidda.
    avna dad alle cyndicate bank alli idru.. naanu matte Bhimrayappa ibbaru haakidvi, but avndu through aagirlilla..

    ReplyDelete