Monday, November 02, 2009

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನವೆಂಬರ್ ೧, ಕನ್ನಡ ರಾಜ್ಯೋತ್ಸವ, ಬೆಳಿಗ್ಗೆ ೭ ಗಂಟೆಯ ಸಮಯ, ನನ್ನ ಗೆಳಯ ಸತೀಶನ ಕರೆ ಬರ್ತಾ ಇತ್ತು, ಆ ಕಡೆಯಿಂದ "ಹಲೋ" ಎಂದು ಹೇಳುತ್ತಿದ್ದಂತೆ , ನಮಸ್ಕಾರ ಎಂದೇ , ಇವತ್ತು ನಮ್ಮ ಚಲುವ ಕನ್ನಡ ರಾಜ್ಯೋತ್ಸವ ನಾವು ಇವತ್ತಿನ ದಿನ ಯಾವುದೇ ಆಂಗ್ಲ ಭಾಷೆಯ ಶಬ್ಧಗಳನ್ನ ಬಳಸದೆ ಮಾತಾಡೋಣ ಎಂದೇ. ಅದಕ್ಕೆ ಅವನು "ಓಕೆ " ಅಂತಿದ್ದಂತೆ, ಓಕೆ ಅಲ್ಲ ಮಾರಾಯ , ಸರಿ ಅಂತ ಬಯ್ದು ಮಾತು ಮುಂದುವರಿಸಿದೆವು. ಅವನಿಗೆ ಮದುವೆ ಬಟ್ಟೆ ತೆಗೆದು ಕೊಳ್ಳಲು ಜಯನಗರಕ್ಕೆ ಹೋಗಬೇಕಾಗಿತ್ತು. ಸರಿ ಹೋಗೋಣ ಎಂದೆ.

ನಮ್ಮ ವಾಹನಕ್ಕೆ ಕನ್ನಡ ಬಾವುಟವನ್ನ ಹಾಕಿಕೊಂಡು ಹೊರಟೆವು. ಅಲ್ಲಿ ಇನ್ನು ಕೆಲವು ಸ್ನೇಹಿತರು ನಮ್ಮನ್ನ ಕೂಡಿಕೊಂಡರು. ಎಲ್ಲರು ೧೦೦ಕ್ಕೆ ೧೦೦ ಪ್ರತಿಶತ ಕನ್ನಡ ಪದಗಳನ್ನೇ ಬಳಸಬೇಕೆಂದು ಮಾತಾಡಿಕೊಂಡೆವು. ಅವರಲ್ಲಿ ಒಬ್ಬನ ಹೆಸರು FS paatil , ಅವನಿಗೆ ಪಶಿ. ಪಾಟಿಲ್ ಅಂತ ಮರು ನಾಮಕರಣ ಮಾಡಿದೆವು.

ನಮ್ಮಲ್ಲಿ ಎಲ್ಲರು ಒಂದಿಲ್ಲೋಮ್ಮೋ ಆಂಗ್ಲ ಪದಗಳನ್ನ ಬಳಸೇ ಬಿಡುತ್ತಿದ್ದರು, ಒಬ್ಬರ ತಪ್ಪನ್ನು ಒಬ್ಬರು ಸರಿಮಾಡುತ್ತ ಸಾಗಿತ್ತು ನಮ್ಮ ಕರೀದಿ. ಎಲ್ಲರಿಗೂ ಒಂದಿಲೊಂದು ಪದಗಳ ಅರ್ಥ ತಕ್ಷಣಕ್ಕೆ ನೆನಪಿಗೆ ಬರುತ್ತಿರಲಿಲ್ಲ. ಆಗಲೇ ಗೊತ್ತಾಗಿದ್ದು ನಮ್ಮ ಕನ್ನಡ ಎಷ್ಟರ ಮಟ್ಟಿಗೆ ಶುದ್ದವಗಿದೆ ಮತ್ತು ಅದೆಸ್ಟು ಬೇರೆ ಬಾಷೆಗಳ ಪ್ರಭಾವಕ್ಕೆ ಒಳಗಾಗಿದೆ ಎಂದು. ಒಂದೂ ಆಂಗ್ಲ ಭಾಷೆಯ ಪದಗಳನ್ನ ಬಳಸದೆ ಮಾತಾಡುವ ಯಕ್ಷಗಾನ ಕಲಾವಿದರನ್ನ ನೆನಸಿಕೊಂಡೆ.

ಇನ್ನು ಅಲ್ಲಿನ ಅಂಗಡಿಯಲ್ಲಿರುವವರೆಲ್ಲ ಆಂಗ್ಲ ಬಾಷೆಯಲ್ಲೇ ನಮ್ಮನ್ನ ಸ್ವಾಗತಿಸುತ್ತಿದ್ದರು. ಅವರಿಗೆಲ್ಲ ಕನ್ನಡ ಬರುತ್ತಿತ್ತು. ನಾವು ಕನ್ನಡ ಮಾತಾಡಿದ ಮೇಲೆ ಕನ್ನಡದಲ್ಲಿ ಮಾತಾಡಲು ಪ್ರಾರಂಭಿಸುತ್ತಿದ್ದರು. ಇನ್ನು ಅದೆಸ್ಟೋ ಪದಗಳ ಅರ್ಥ ನಮಗೂ ಗೊತ್ತಿಲ್ಲದೆ ನಾವೇ ಮರುನಾಮಕರಣ ಮಾಡಿಕೊಳ್ಳಬೇಕಾಗಿತ್ತು.

ಇದಕ್ಕೆಲ್ಲ ಕಾರಣಗಳೆನಪ್ಪ ಅಂತಾ ಯೋಚಿಸುತ್ತಿದ್ದೆ , ಮುಖ್ಯವಾಗಿ ಗಮನಿಸಿದ್ದು, ಕನ್ನಡ ಮಾತಾಡಿದರೆ ತಮ್ಮ ದರ್ಜೆ ಕಡಿಮೆಯಾಗುತ್ತದೆ ಅಂತ ಜನರು ಭಾವಿಸುವದು; ಆಂಗ್ಲ ಬಾಷೆಯ ಮೇಲಿನ ಪ್ರೇಮ ಮತ್ತು ಬರುತ್ತದೆ ಎಂದು ತೋರಿಸಿಕೊಳ್ಳುವದು ಅನ್ನಿಸಿತು.

ನಾನು ಸಮಸ್ತ ಕನ್ನಡಿಗರಲ್ಲಿ ಕೇಳಿ ಕೊಳ್ಳುವದೆನೆಂದರೆ , ನಾವು ಕನ್ನಡಿಗರು ಮತ್ತು ನಮ್ಮ ಕನ್ನಡ ಭಾಷೆ ಯಾವುದಕ್ಕಿಂತ ಕಡಿಮೆಯಿಲ್ಲ. ನಾವು ನಮ್ಮ ಭಾಷೆಯನ್ನ ಗೌರವಿಸೋಣ; ಪ್ರೀತಿಸೋಣ. ಹಾಗಂತ ಇತರ ಭಾಷೆಗಳನ್ನ ದ್ವೇಷಿಸಿ ಅಂತ ನಾನು ಹೇಳುತ್ತಿಲ್ಲ , ನಮ್ಮ ಭಾಷೆ ನಮಗೆ ತಾಯಿ ಇದ್ದಂತೆ, ಅಂದರೆ ತಾಯಿಯ ಗೌರವ ಕೊಟ್ಟು ಕಾಪಾಡೋಣ.
ಸಮಸ್ತ ಕನ್ನಡ ಕುಲ ಕೋಟಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ; ಸಿರಿಗನ್ನಡಂ ಬಾಳ್ಗೆ.

1 comment:

  1. ನಿಮ್ಮ ಕನ್ನಡ ಬಗೆಗಿನ ಕಾಳಜಿ ನೋಡಿ ತುಂಬಾ ಖುಷಿ ಆಯಿತು ... ಈಗಿನ ಕಾಲದಲ್ಲಿ ಅದರಲ್ಲೂ Software Eng.
    ಅಂದ್ರೆ ಮಾತೃ ಭಾಷೆ ಕನ್ನಡ ಆದರು ಪ್ರತಿಷ್ಟೆ ತೋರಿಸ್ಕೊಲೋಕೆ ನೋಡ್ತಾರೆ ಹೊರತು .. ಕನ್ನಡ ಮಾತಾಡಲ್ಲ ... ಎಲ್ಲರು ನಿಮ್ಮ ರೀತಿ ಯೋಚಿಸಿದರೆ, ಬದುಕ ಬಹುದೇನೋ ಕನ್ನಡ

    ReplyDelete